ಕೂಡು ಪೊರೆಯೂತ
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಕೂಡುಪೊರೆಗೆ (ಅಂದರೆ ಕಣ್ಣುರೆಪ್ಪೆಯ ಒಳಮೈಯನ್ನು ಕಣ್ಣು ಗುಡ್ಡೆಯನ್ನು ಆವರಿಸಿರುವ ಅಧ್ರ್ರಚರ್ಮ, ಕಂಜಂಕ್ಟೈವ) ಬರುವ ಊತ (ಕಂಜಂಕ್ಟಿವೈಟೀಸ್). ಈ ಉರಿಯೂತ ವಯೋಮಿತಿಯಿಲ್ಲದೆ ಮಕ್ಕಳಲ್ಲೂ, ದೊಡ್ಡವರಲ್ಲೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಬೇಸಗೆ ಮತ್ತು ವಸಂತ ಋತುಗಳಲ್ಲಿ ಇದರ ತೀವ್ರತೆ ಅಧಿಕ. ಇದರಿಂದ ವಿಶೇಷ ತೊಂದರೆಯಾಗದಿದ್ದರೂ ಕೆಲವು ಉತ್ಕಟ ಬಗೆಯವೂ ದೃಷ್ಟಿನಾಶವನ್ನೂ ಕೂಡ ತರಬಲ್ಲವು. ಮನೆಯಲ್ಲಿ ಒಂದು ಮಗುವಿಗೆ ಬಂದರೆ ವರಸೆಯಾಗಿ ಮನೆಯಲ್ಲಿರುವವರಿಗೆಲ್ಲರಿಗೂ ಈ ರೋಗ ಹರಡುವುದುಂಟು. ಇದು ಒಂದು ಬಗೆಯ ಸೋಂಕು ರೋಗ. ಕಣ್ಣುರಿ, ಕಣ್ಣಿನ ರೆಪ್ಪೆಯೊಳಗೆ ಬಾಹ್ಯಪದಾರ್ಥ ಸೇರಿದಂತೆ ಭಾಸವಾಗುವಿಕೆ, ಕಣ್ಣು ಉಜ್ಜುವಿಕೆ, ಕಣ್ಣಲ್ಲಿ ನೀರು ಸುರಿಯುವುದು, ಕೆಂಗಣ್ಣು- ಇವು ರೋಗದ ಲಕ್ಷಣಗಳು. ಕಣ್ಣಿನ ರೆಪ್ಪೆಗಳು ಊದಿ ಪುಳುಕು ಕಟ್ಟಿ, ಬೆಳಗಿನ ಹೊತ್ತು ಕಣ್ಣನ್ನು ತೆರೆಯುವುದಕ್ಕೆ ಆಗುವುದಿಲ್ಲ. ಕೆಲವರು ಪ್ರಶ್ನಿಸಿದಾಗ ಮಾತ್ರ ಬೆಳಗಿನಲ್ಲಿ ಕಣ್ಣುರೆಪ್ಪೆಗಳು ಅಂಟಿಕೊಂಡಿರುತ್ತವೆ ಎಂದು ಹೇಳುವರು. ಪುಳುಕನ್ನು ಸೂಕ್ಷ್ಮದರ್ಶಿಗಳಲ್ಲಿ ಪರೀಕ್ಷಿಸಿ ನೋಡಿದಲ್ಲಿ ಈ ರೋಗವನ್ನು ಉಂಟುಮಾಡುವ ವಿಷಕ್ರಿಮಿಗಳು ಕಾಣಿಸುವುವು. ಇವುಗಳಲ್ಲಿ ಮುಖ್ಯವಾದುವು ಕಾಕ್‍ವೀಕನ ದಂಡಾಣು, ನ್ಯೂಮೋಕಾಕಸ್, ಸ್ಟೆಫಲೋಕಾಕಸ್, ಇನ್‍ಫ್ಲೊಯೆಂಜಾ ದಂಡಾಣು ಮತ್ತು ಗೊನಾಕಾಕಸ್.

	ಮಕ್ಕಳಲ್ಲಿ ದಡಾರ ಕಾಣಿಸುವುದಕ್ಕೆ ಮುಂಚೆ ಕಣ್ಣು ಕೆಂಪಾಗಿ ನೀರು ಸುರಿಯುವುದುಂಟು, ಇದಕ್ಕೆ ಅತ್ಯಂತ ಸೂಕ್ಷ್ಮವಾದ ವೈರಸುಗಳು ಕಾರಣ. ಹುಟ್ಟುವ ಮಕ್ಕಳ ಕೀವುಗಣ್ಣಿಗೂ ಈ ವೈರಸೇ ಕಾರಣ. ಈಜು ಕೊಳದಲ್ಲಿ ಅನೇಕ ಮಂದಿ ಈಜುವುದರಿಂದ ಹಲವರಲ್ಲಿ ಕಣ್ಣು ಕೆಂಪಗಾಗುವುದುಂಟು. ಇಲ್ಲೂ ವೈರಸ್ಸಿನದೇ ಪಾತ್ರ. ಆದ್ದರಿಂದ ಈಜುವ ಕೊಳದ ನೀರನ್ನು ಪದೇ ಪದೇ ಬದಲಾಯಿಸುವುದು ಅವಶ್ಯಕ. ಅಲ್ಲದೆ ಈಜುವ ನೀರು ಶುದ್ಧವಾಗಿರಬೇಕು. ಅರಿರೋಗ ಕೂಡ ಒಂದು ಬಗೆಯ ವೈರಸ್‍ಜನ್ಯ. 

	ಬೇಸಗೆಯ ಮೊದಲಲ್ಲಿ ಮಕ್ಕಳಲ್ಲಿ ಉಜ್ಜುವಿಕೆಯಿಂದ ಆರಂಭವಾಗುವ ಕಣ್ಗೆಂಪು ಇನ್ನೊಂದು ಬಗೆಯದು. ಇದು ಚಳಿಗಾಲದ ಹೊತ್ತಿಗೆ ಪೂರ್ತಿಯಾಗಿ ಮಾಯವಾಗಿ ಮತ್ತೆ ಬೇಸಗೆಯಲ್ಲಿ ಮರುಕಳಿಸುವುದು ರೂಢಿ. ಕಣ್ಣುಗಳನ್ನು ಎಷ್ಟು ಉಜ್ಜಿಕೊಂಡರೂ ರೋಗಿಗೆ ಸಮಾಧಾನ ದೊರಕದು. ಕಣ್ಣಲ್ಲಿ ನೀರು ಸುರಿಯುವುದು, ಬೆಳಕಿನ ಭೀತಿ, ಕಣ್ಣು ಬೆಚ್ಚಗಿರುವಂತೆ ಭಾಸವಾಗುವುದು, ರೆಪ್ಪೆಯ ಒಳಗೆ ಒಂದೇ ಗಾತ್ರದ ಹಾಲುಬಣ್ಣದ ಹರಳುಗಳು ಉಕ್ಕುವುದು- ಇವೆಲ್ಲಾ ಲಕ್ಷಣಗಳು. ಕರಿಗುಡ್ಡೆಯ ಸುತ್ತ ಮಾಸಲು ಬೂದುಬಣ್ಣದ ರಾಶಿ ಕೆರೆಯ ದಂಡೆಯಂತೆ ಕಾಣುವುದು. ವಯಸ್ಸಾದವರಲ್ಲಿ ಕಣ್ಣಿನ ಅಂಚಿನ ಕೋನಗಳಲ್ಲಿ ಇನ್ನೊಂದು ಬಗೆಯ ಕಣ್ಗೆಂಪು ಕಾಣಿಸಿಕೊಳ್ಳುವುದುಂಟು. ಮೊರಾಕ್ಸ್, ಆಕ್ಸೇನ್ ಫೀಲ್ಡ್ ದಂಡಾಣು ಈ ಬಗೆಯ ರೋಗದ ಕಾರಕ. ಕಣ್ಣುಜ್ಜುವಿಕೆ, ಕಣ್ಣುರಿ, ಕಣ್ಣು ಒಣಗಿರುವಂತೆ ಭಾಸ ಕಣ್ಣು ರೆಪ್ಪೆಗಳು ಸ್ವಲ್ಪ ಅಂಟಿಕೊಂಡಿರುವುದು, ಕಣ್ಣಿನ ಕೋನಗಳ ಅಂಚು ಕೆಂಪಾಗಿರುವುದು ಈ ರೋಗದ ಲಕ್ಷಣಗಳು. 

	ಡಿಫ್ತೀರಿಯಾದ ಪರಿಣಾಮವಾಗಿ ಇಲ್ಲವೆ ಜೊತೆಯಲ್ಲಿಯೇ ಡಿಫ್ತೀರಿಯಾ ದಂಡಾಣುಗಳು ಕೂಡುಪೊರೆಯನ್ನು ಮುತ್ತಿ ಅಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ಆಗ ಕೂಡುಪೊರೆ ಕೆಂಪಾಗಿ ಉರಿಯುವುದಲ್ಲದೆ ಅದರ ಮೇಲೆ ಬೂದು ಹಳದಿ ಮಿಶ್ರಿತ ಬಣ್ಣದ ಪೊರೆಯುಂಟಾಗುವುದು. ಡಿಫ್ತೀರಿಯಾ ದಂಡಾಣುಗಳು ಕಣ್ಣಿನ ಸ್ವಚ್ಛ ಮಂಡಲವನ್ನು ಹೊಕ್ಕು ಅಲ್ಲಿ ವ್ರಣವನ್ನುಂಟುಮಾಡುವುವು. ಅಂತಿಮಾವಸ್ಥೆಯಲ್ಲಿ ರೆಪ್ಪೆಗಳ ವಿಕಾರ ಕಾಣುವುದು. ವಯಸ್ಕರಲ್ಲಿ ಗೊನೊರಿಯಾ ಮೇಹವ್ಯಾಧಿಯ ಪರಿಣಾಮವಾಗಿ ನೇರವಾಗಿಯೋ ಇಲ್ಲವೆ ಸೋಂಕುತಗಲಿದ ಬಟ್ಟೆ ಕರವಸ್ತ್ರಗಳ ಮೂಲಕವೋ ರೋಗದ ಸೋಂಕು ಕಣ್ಣಿಗೆ ತಗಲಿ, ಕಣ್ಣು ಕೆಂಪಾಗಿ ಕೀವುಗಣ್ಣಾಗುವುದು. ಸೋಂಕು ತಗಲಿದ ಕೆಲವು ಗಂಟೆಗಳಿಂದ ಮೂರು ದಿವಸಗಳಲ್ಲಿ ರೋಗ ಕಾಣಿಸಿಕೊಳ್ಳುವುದು. ರೋಗಿ ಕಣ್ಣಲ್ಲಿ ಚುಚ್ಚುನೋವಿರುವುದೆಂದು ಹೇಳುತ್ತಾನೆ. ರೆಪ್ಪೆಗಳು ಬಾತು ಹೆಚ್ಚು ಕೆಂಪಾಗಿ ಕಣ್ಣು ಬಿಡಲಾಗುವುದಿಲ್ಲ. ಬಿಳಿಯ ಗುಡ್ಡೆಯನ್ನು ಮುಚ್ಚಿರುವ ಕೂಡುಪೊರೆ ಊದಿಕೊಂಡು ಸ್ವಚ್ಛ ಮಂಡಲವನ್ನು ಮುಚ್ಚಿರುವುದು. ಕಣ್ಣಿಂದ ನೀರು ಸುರಿಯಲಾರಂಭಿಸಿ, ಆಮೇಲೆ ರಕ್ತಮಿಶ್ರಿತ ನೀರು ಬರಲಾರಂಭಿಸಿ ಕೊನೆಗೆ ಕೀವು ಯಥೇಚ್ಛವಾಗಿ ಸುರಿಯುವುದು. ಗೊನೊಕಾಕಸ್ ಸ್ವಚ್ಛಮಂಡಲವನ್ನು ಸಹ ಹೊಕ್ಕು ವ್ರಣವನ್ನುಂಟುಮಾಡುವುದು. ಚಿಕಿತ್ಸೆ ಸರಿಯಾದ ಹಂತದಲ್ಲಿ ದೊರೆಯದಿದ್ದಲ್ಲಿ ಕುರುಡನ್ನು ಅಪ್ಪಬೇಕಾಗುವುದು.

	ಕಣ್ಣು ಕೆರಳುವಿಕೆ : ಇದು ಸಹ ಒಂದು ಬಗೆಯ ಕೂಡುಪೊರೆಯೂತ(ಕಟಾರ್ ಆಫ್ ದಿ ಐ). ಈ ಸ್ಥಿತಿಗೆ ಕಾರಣಗಳು ಹಲವಾರು. ರಾಸಾಯನಿಕ ವಸ್ತುಗಳು, ದೂಳು, ಕೆಟ್ಟಗಾಳಿ, ಹೊರವಸ್ತುಗಳು, ಗಾಯಗಳು, ಲೋಹದ ಅಣುಗಳು ಮುಂತಾದುವು ಕಣ್ಣೊಳಕ್ಕೆ ಸೇರಿ ಉಜ್ಜುವಂತಾಗಿ ಕಣ್ಣುಗಳು ಕೆಂಪಾಗುತ್ತವೆ. ಇವುಗಳಲ್ಲದೆ ಸೂಕ್ಷ್ಮಾಣುಗಳೂ ದಂಡಾಣುಗಳೂ ಗಾಳಿಯಿಂದಾಗಲಿ ಇಲ್ಲವೆ ರೋಗಿಗಳಿಂದಾಗಲಿ ಕಣ್ಣನ್ನು ಪ್ರವೇಶಿಸಿ ಕಣ್ಗೆಂಪನ್ನು ಉಂಟು ಮಾಡುವುದುಂಟು. ಧೂಮಪಾನದ ಹೊಗೆ, ಅತಿಮದ್ಯಪಾನ, ಸರಿಹೊಂದದ ಕನ್ನಡಕಗಳು ಹತ್ತಿರದ ಕೆಲಸವನ್ನು ಕನ್ನಡಕಗಳನ್ನು ಬಳಸದೆ ಮಾಡುವುದು. ಸೂಕ್ಷ್ಮತೆ-ಇವು ಕೂಡ ಕಣ್ಣುಗಳಲ್ಲಿ ಕೆಂಪನ್ನೂ ಒಂದು ಬಗೆಯ ಬಳಲಿಕೆ ಮತ್ತು ನೋವನ್ನೂ ಉಂಟುಮಾಡುತ್ತವೆ. ಆಗ ಕಣ್ಣುರೆಪ್ಪೆಗಳು ಭಾರವಾದಂತೆ ಭಾಸವಾಗುವುದು. ಬೆಳಕು ಕಣ್ಣನ್ನು ಚುಚ್ಚಿದಂತೆ ಅನ್ನಿಸುವುದು. ಬೆಳಿಗ್ಗೆ ಏಳುವಾಗ ಕಣ್ಣುರೆಪ್ಪೆಗಳು ಅಂಟಿಕೊಂಡು ಒಂದು ಬಗೆಯ ಲೋಳೆಯಂಥ ಅಂಟು ರೆಪ್ಪೆಗಳ ಅಂಚಿನಲ್ಲಿ ಕಾಣಿಸುವುದುಂಟು. ಹಲವು ವೇಳೆ ಕಣ್ಗೆಂಪು ಶಾಶ್ವತವಾಗಿರಬಹುದು ಇಲ್ಲವೇ ಬಹಳ ದಿವಸಗಳ ವರೆಗೆ ಬಾಧಿಸಬಹುದು. ಕಣ್ಣುರಿ, ಕಣ್ಣೊಳಗೆ ಏನೋ ಹೊರಪದಾರ್ಥ ಬಿದ್ದಂತಿರುವುದು, ಕಣ್ಣಲ್ಲಿ ತೇವವಿಲ್ಲದಿರುವುದು, ಕಣ್ಣುಜ್ಜುವಿಕೆ, ಕಣ್ಣಲ್ಲಿ ನೀರು ಹರಿಯುವುದು- ಇವು ರೋಗಿ ಹೇಳುವ ತೊಂದರೆಗಳು. ಯುಕ್ತ ವಿಶ್ರಾಂತಿ, ನೈರ್ಮಲ್ಯಪಾಲನೆ ಹಾಗೂ ಸಮರ್ಪಕ ಚಿಕಿತ್ಸೆಯಿಂದ ಕಣ್ಣು ಕೆರಳುವಿಕೆಯನ್ನು ಗುಣಪಡಿಸಿಕೊಳ್ಳಬಹುದು.								(ಎಸ್.ಟಿ.ಪಿ)